ಪಂತುಲು, ಬಿ ಆರ್
 	(1911-1974) ಕನ್ನಡ ರಂಗಭೂಮಿ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ. ಹುಟ್ಟಿದ್ದು ಕೋಲಾರ ಜಿಲ್ಲೆಯ ಬಂಗಾರು ಪೇಟೆ ಸಮೀಪದ ಬುಡುಗೂರಿನಲ್ಲಿ (26-11-1911). ನಿಜನಾಮ ಬಿ. ರಾಮಕೃಷ್ಣ. ತಂದೆ ಕಲಾಪ್ರೇಮಿಯೂ ನಾಟಕಕಲೆಯಲ್ಲಿ ಅಭಿರುಚಿಯೂ ಇದ್ದ ವೆಂಕಟಾಚಲಯ್ಯ. ಕಿರಿಯ ಮಗನಾದ ಇವರು ಹುಟ್ಟುಕಲಾವಿದರು. ಮೊದಲಿನಿಂದ ರಂಗಭೂಮಿಯಲ್ಲಿ ಆಸಕ್ತಿ. ಮಾತೃಭಾಷೆ ತೆಲುಗಾದರೂ ತಾವಿದ್ದ ಪ್ರದೇಶ ಭಾಷಾಸಂಕರದ ತಾಣವಾದುದರಿಂದ ಕನ್ನಡ, ತಮಿಳು, ಭಾಷೆಗಳೂ ಲೀಲಾಜಾಲವಾಗಿ ಬಂದವು. ಹುಟ್ಟೂರಿನಲ್ಲಿ ಅನಂತರ ಮದ್ರಾಸಿನಲ್ಲಿ ವ್ಯಾಸಂಗವನ್ನು ಮುಗಿಸಿದ ಮೇಲೆ ತಮ್ಮ ಊರ ಸಮೀಪದ ಕುಪ್ಪಂನಲ್ಲಿ ಶಾಲಾ ಉಪಾಧ್ಯಾಯರಾಗಿ ಕೆಲ ಕಾಲ ನಿಂತರು. ಶಾಲಾವಧಿಯಲ್ಲಿಯೇ ನಾಟಕಗಳಲ್ಲಿ ಅಭಿನಯಿಸಿ ಪ್ರಶಂಸೆ ಪಡೆದು ಅದರ ಗೀಳು ಹತ್ತಿಸಿಕೊಂಡರು ಇವರು ಬಹುಕಾಲ ಶಿಕ್ಷಕವೃತ್ತಿಯಲ್ಲಿ ಉಳಿಯಲಿಲ್ಲ. ಬೆಂಗಳೂರಿಗೆ ಬಂದರ. ಮಹಮದ್ ಪೀರರ ಚಂದ್ರಕಲಾ ನಾಟಕ ಸಭೆಯಲ್ಲಿ ಇವರ ರಂಗ ಜೀವನ ಆರಂಭವಾಯಿತು (1932). ಮೊದಲು ಶಿಕ್ಷಕ ವೃತ್ತಿಯಲ್ಲಿದ್ದುದರಿಂದ ಇವರಿಗೆ ಪಂತುಲು (ಉಪಾಧ್ಯಾಯ) ಎನ್ನು ಅಡ್ಡಹೆಸರು ಬಂದು ಅದು ಸ್ಥಿರವಾಗಿ ಉಳಿಯಿತು. ಇವರು ಅಭಿನಯಿಸಿದ ಮೊದಲ ನಾಟಕ ಷಹಜಹಾನ್. ಆಮೇಲೆ ಸಂಸಾರ ನೌಕದ ಸುಂದರ, ಸದಾರಮೆಯ ಪುರೋಹಿತ, ರಾಮಾಯಣದ ರಾವಣ, ಗುಲೇಬಕಾವಲಿಯ ನಾಯಕ ಈ ಪಾತ್ರಗಳಿಂದ ಪ್ರಶಂಸೆಗೆ ಪಾತ್ರರಾದರು. ಸಂಸಾರನೌಕ ಬೆಂಗಳೂರಿನಲ್ಲಿ ಸತತವಾಗಿ 125 ಸಲ ಪ್ರದರ್ಶನಗೊಂಡು ದಾಖಲೆ ಸ್ಥಾಪಿಸಿತು. ಕೆಲವು ವರ್ಷಗಳ ಅನಂತರ ಪೀರ್ ಕಂಪನಿಯನ್ನು ಬಿಟ್ಟು ವೀರಣ್ಣವರ ಗುಬ್ಬಿ ಕಂಪನಿ ಸೇರಿದರು. ಅಲ್ಲಿದ್ದಾಗ ಆಶಾ-ಪಾಶಾ ಹಾಗೂ ಕೃಷ್ಣಗಾರುಡಿ ನಾಟಕಗಳಲ್ಲಿ ಪಾತ್ರವಹಿಸಿದರು. ಕಾರಣಾಂತರಗಳಿಂದ ಗುಬ್ಬಿ ಕಂಪನಿಯಲ್ಲೂ ಬಹಳ ಕಾಲ ಉಳಿಯದೆ ಹೊರಬಂದು ಎಂ. ಮಾಧವರಾಯರ ಜೊತೆಗೂಡಿ ಕಲಾ ಸೇವಾ ಮಂಡಲಿ ಎಂಬ ಸ್ವಂತ ನಾಟಕ ಕಂಪನಿಯನ್ನು ಕಟ್ಟಿದರು. ಎಚ್.ಎಲ್.ಎನ್. ಸಿಂಹ, ಎಂ.ಎಸ್. ಮಾಧವರಾವ್, ಎಂ. ಮಾಧವರಾವ್ (ಡಿಕ್ಕಿ ಮಾಧವರಾವ್) ಹೊಳಲಿ ಸುಬ್ರಹ್ಮಣ್ಯಶಾಸ್ತ್ರಿ ಮೊದಲಾದ ಅನೇಕ ಪ್ರತಿಭಾನ್ವಿತ ರಂಗನಟರ ಸಹವಾಸ ಇವರಿಗೆ ದೊರೆತಿದ್ದು ಅಲ್ಲಿಯೆ. ಇವರು ಪಾತ್ರವಹಿಸಿದ ಸಂಸಾರನೌಕ, ಸದಾರಮೆ, ರಾಮಾಯಣ, ಗುಲೇಬಕಾವಲಿ ನಾಟಕಗಳು ಬಹಳಷ್ಟು ಜನಪ್ರಿಯವಾದವು. ಕನ್ನಡ ನಾಡಿನಲ್ಲಿ ಮಾತ್ರವಲ್ಲ್ಲದೆ ತಮಿಳುನಾಡು, ಆಂಧ್ರಗಳಲ್ಲೂ ಇವರ ನಾಟಕಗಳು ಕಲಾ ಪ್ರೇಮಿಗಳ ಮೆಚ್ಚಗೆಗಳಿಸಿದವು. ಆದರೆ ಆರ್ಥಿಕವಾಗಿ ಲಾಭದಾಯಕವೆನಿಸಲಿಲ್ಲ. ಮದ್ರಾಸಿನಲ್ಲಿ ಇವರ ಸಂಸಾರನೌಕ ನಾಟಕವನ್ನು ನೋಡಿ ಅದನ್ನು ಬೆಳ್ಳಿ ತೆರೆಗೆ ತರಲು ದೇವಿ ಫಿಲಂಸ್ ಎಂಬ ಚಿತ್ರಸಂಸ್ಥೆ ಮುಂದೆ ಬಂದಿತು. ಹಲವಾರು ನಾಟಕಗಳಲ್ಲು ನೂರಾರು ಬಗೆ ಪಾತ್ರಗಳನ್ನು ಅಭಿನಯಿಸಿದ ಪಂತಲು ಸಂಸಾರನೌಕ ಚಿತ್ರದ ಮೂಲಕ ಚಲನಚಿತ್ರ ನಟರಾದರು. ಎಚ್.ಎಲ್.ಎನ್.ಸಿಂಹರ ನಿರ್ದೇಶನದಲ್ಲಿ ತಯಾರಾದ ಮೊಟ್ಟಮೊದಲ (1936) ಕನ್ನಡ ಸಾಮಾಜಿಕ ಚಿತ್ರವಾದ ಸಂಸಾರ ನೌಕದಲ್ಲಿಯು ಇವರದು ಸುಂದರನ ಪಾತ್ರ. ಕನ್ನಡದ ಪ್ರಥಮ ನಿರ್ಮಾಪಕಿ ಎಂ.ವಿ. ರಾಜಮ್ಮ ನಿರ್ಮಿಸಿದ ರಾಧಾರಮಣ (1943) ಚಿತ್ರದಲ್ಲೂ ಇವರೇ ನಾಯಕ. ಈ ಮಧ್ಯೆ ರಾಜಭಕಿ'್ತ ಎಂಬ ತಮಿಳು ಚಿತ್ರದಲ್ಲಯೂ ಪಾತ್ರವಹಿಸಿದರು. ಆರ್ಥಿಕ ಮುಗ್ಗಟ್ಟಿನಿಂದಾಗಿ ತಾವೇ ಕಟ್ಟಿದ್ದ ನಾಟಕ ಕಂಪನಿ ಕುಸಿದ ಮೇಲೆ ಸ್ವಲ್ಪಕಾಲ ಟಿ.ಆರ್. ಮಹಾಲಿಂಗಂ ಅವರ ನಾಟಕ ಕಂಪನಿಯಲ್ಲಿ ಮ್ಯಾನೇಜರ್ ಆಗಿಯೂ ನಟರಾಗಿಯೂ ಸೇವೆ ಸಲ್ಲಿಸಿದರು. ಲವಂಗಿ, ವಿಜಯಲಕ್ಷ್ಮೀ, ವೀ ಟು ಮುಂತಾದ ತೆಲುಗು, ತಮಿಳು ಚಿತ್ರಗಳಲ್ಲೂ ಪಾತ್ರವಹಿಸಿದರು. ನಾಮ್ ಇರುವರ್ (1940) ಚಿತ್ರದಲ್ಲಿ ಟಿ.ಆರ್. ಮಹಲಿಂಗಂ ಅವರೊಡನೆ ಸಹನಟರಾಗಿ ಅಭಿನಯಿಸಿದರು. ಎ.ವಿ.ಎಂ. ಚಿತ್ರಸಂಸ್ಥೆಯ ವೀ ಟು ಚಿತ್ರದಿಂದ ಇವರ ಹೆಸರು ತಮಿಳು ಚಿತ್ರರಂಗಲ್ಲಿಯೂ ಪರಿಚಿತವಾಯಿತು. ಆಮೇಲೆ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸುವ ಮಹತ್ತ್ವಾಕಾಂಕ್ಷೆಯಿಂದ ಟಿ.ಆರ್. ಮಹಾಲಿಂಗಂ ಅವರ ಜೊತೆಗೂಡಿ ಸುಕುಮಾರ ಪ್ರೊಡಕ್ಷನ್ ಎಂಬ ಚಿತ್ರಸಂಸ್ಥೆಯನ್ನು ಕಟ್ಟಿದರು. ಆದರೆ ಮಚ್ಛರೇಖಾ ಎಂಬ ಒಂದೇ ಚಿತ್ರದ ತಯಾರಿಕೆಯೊಡನೆ ಈ ಜಂಟಿ ಪ್ರಯತ್ನ ಕೊನೆಗೊಂಡಿತು. ಅನಂತರ ಪತ್ರಿಕಾ ಸಂಪಾದಕರೂ ಚಿತ್ರಸಾಹಿತಿಗಳೂ ಆದ ಪ. ನೀಲಕಂಠನ್ ಅವರ ಜೊತೆ ಪಾಲುದಾರರಾಗಿ ಪದ್ಮಿನಿ ಪಿಕ್ಚರ್À್ಸ ಎಂಬ ಸಂಸ್ಥೆ ಸ್ಥಾಪಿಸಿದರು. ಇವರು ನಿರ್ಮಿಸಿದ ಮೊದಲ ಚಿತ್ರ ಕಲ್ಯಾಣ ಪೆಣ್ಣಿಯಾರ ಬ್ರಹ್ಮಚಾರಿ (1954). ಅನಂತರ ಮೊದಲತೇದಿ (1955) ಮತ್ತು ನಂಬೆಕ್ಕ (1955) ಚಿತ್ರಗಳು ಹೊರಬಂದವು. ಈ ಮಧ್ಯೆ ಪಾಲುದಾರರಲ್ಲಿ ಒಡಕು ತಲೆದೋರಿ ಕೊನೆಗೆ ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯ ಪೂರ್ಣಸ್ವಾಮ್ಯ ಇವರದಾಯಿತು. ಇವರ ಮೊದಲ ನಿರ್ದೇಶನದ ರತ್ನಗಿರಿ ರಹಸ್ಯ (1957) ಹಣಗಳಿಕೆಯಲ್ಲಿ ದಾಖಲೆ ಸ್ಥಾಪಿಸಿತು. ಈ ಚಿತ್ರ ತಂಗಮಲೈ ರಹಸ್ಯರ ಎನ್ನುವ ಹೆಸರಿನಲ್ಲಿ ತಮಿಳು ಭಾಷೆಯಲ್ಲಿ ತೆರೆಕಂಡಿದೆ. ಇವರ ನಿರ್ದೇಶನದ ಎರಡನೆಯ ಚಿತ್ರ ಸ್ಕೂಲ್ ಮಾಸ್ಟರ್ (1958) ರಾಷ್ಟ್ರೀಯ ಪ್ರಶಸ್ತಿ ಸಾಲಿನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಭಾರತೀಯ ಭಾಷಾಚಿತ್ರಗಳಿಗೆ ನೀಡುವ ಅರ್ಹತಾ ಪತ್ರ ಪಡೆದ ಪ್ರಥಮ ಕನ್ನಡ ಚಿತ್ರ. ಅತ್ಯಂತ ಜನಪ್ರಿಯವಾದ ಈ ಚಿತ್ರವನ್ನು ಇವರು ಇತರ ಭಾರತೀಯ ಭಾಷೆಗಳಲ್ಲೂ ಪುನರ್ನಿರ್ಮಿಸಿದರು. ತಮ್ಮ ಸ್ವಂತ ಚಿತ್ರಗಳಲ್ಲದೆ ಇತರ ಚಿತ್ರಗಳಲ್ಲಿಯೂ ಇವರ ಅಭಿನಯಿಸುತ್ತಿದ್ದುದುಂಟು. ಜೊತೆಗೆ ಚಿತ್ರಗಳನ್ನು ನಿರ್ದೇಶಿಸಿದ್ದೂ ಉಂಟು. ಅಬ್ಬಾ ಆ ಹುಡುಗಿ (1958) ಚಿತ್ರದಲ್ಲಿ ಇವರು ಅಭಿನಯಿಸಿದ್ದಾರೆ. ಎಂ.ವಿ.ಆರ್. ಪ್ರೊಡಕ್ಷನ್ಸಾಗಾಗಿ ಇವರು ನಿರ್ದೇಶಿಸಿದ ಮಕ್ಕಳ ರಾಜ್ಯ (1960) ಕನ್ನಡ ಚಿತ್ರಜಗತ್ತಿನ ಮೊಟ್ಟಮೊದಲ ಮಕ್ಕಳ ಚಿತ್ರ. ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯಿಂದ ಹೊರಬಂದ ಇತರ ಕೆಲವು ಸಾಮಾಜಿಕ ಚಿತ್ರಗಳಲ್ಲಿ ಗಾಳಿಗೋಪುರ (1962), ಸಾಕುಮಗಳು (1963), ಚಿನ್ನದಗೊಂಬೆ (1964) , ದುಡ್ಡೇದೊಡ್ಡಪ್ಪ (1965), ಎಮ್ಮೆ ತಮ್ಮಣ್ಣ (1966), ಬೀದಿಬಸವಣ್ಣ (1967), ಚಿನ್ನಾರಿ ಪುಟ್ಟಣ್ಣ (1968), ಅಮ್ಮಾ (1968), ಗಂಡೊಂದು ಹೆಣ್ಣಾರು (1969), ಅಳಿಯ ಗೆಳೆಯ (1971), ಮಾಲತಿಮಾಧವ (1971) — ಇವು ಪ್ರಮುಖವಾದವು. ಐತಿಹಾಸಿಕ ಚಿತ್ರಗಳನ್ನೂ ತೆಗೆಯುವುದರಲ್ಲಿ ಸಿದ್ಧಹಸ್ತರಾದ ಇವರು ಕಿತ್ತೂರು ಚೆನ್ನಮ್ಮ (1961) ಚಿತ್ರವನ್ನು ತೆಗೆದ ಬಹುಕಾಲದನಂತರ ಅದ್ದೂರಿಯ ಕೃಷ್ಣದೇವರಾಯ (1970) ಚಿತ್ರವನ್ನು ನಿರ್ಮಿಸಿದರು. ಶ್ರೇಷ್ಠ ಚಿತ್ರವೆಂದು ಪರಿಗಣಿತವಾದ ಈ ಚಿತ್ರ ಪ್ರತಿಷ್ಠಿತ ಪತ್ರಿಕೆಯಾದ ಫಿಲಂ ಫೇರ್ ಪ್ರಶಸ್ತಿಯನ್ನು ಗಳಿಸಿತು. ಈ ಚಿತ್ರದಲ್ಲಿನ ಇವರ ತಿಮ್ಮರಸು ಪಾತ್ರದ ಅಭಿನಯಕ್ಕಾಗಿ ರಾಜ್ಯಮಟ್ಟದ ಶ್ರೇಷ್ಠ ನಟ ಪ್ರಶಸ್ತಿ ಇವರಿಗೆ ಬಂತು. ಆದರೆ ಆ ಪ್ರಶಸ್ತಿ ಕೃಷ್ಣದೇವರಾಯ ಪಾತ್ರ ನಿರ್ವಹಿಸಿದ ರಾಜಕುಮಾರ್ ಅವರಿಗೆ ಸಲ್ಲ ಬೇಕೆಂದು ಹೇಳಿ ಪ್ರಶಸ್ತಿಚಿiÀುನ್ನು ನಿರಾಕರಿಸಿದರು. ಸ್ಕೂಲ್ ಮಾಸ್ಟರ್ (1954) ಕಿತ್ತೂರು ಚನ್ನಮ್ಮ (1961) ಚಿತ್ರಗಳಿಗೆ ರಾಷ್ಟ್ರಮಟ್ಟದಲ್ಲಿ ಅರ್ಹತಾ ಪ್ರಶಸ್ತಿ ಪಡೆದವು. ಕನ್ನಡ ಚಿತ್ರದಲ್ಲಿದೆ ತಮಿಳಿನಲ್ಲೂ ಅವರು ಚಿತ್ರಗಳನ್ನು ನಿರ್ಮಿಸಿದ್ದಾರೆ. ವೀರ ಪಾಂಡ್ಯ ಕಟ್ಟಬೊಮ್ಮನ್ ಹಾಗು ಕಪ್ಪಲೋಟ್ಟಿಯ ತಮಿಳನ್ ಎಂಬ ಎರಡು ಮಹಾ ಐತಿಹಾಸಿಕ ಚಿತ್ರಗಳು ಇವರ ಸೃಷ್ಟಿ. ತಮಿಳು ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿ ಅದ್ಭುತ ಯಶಸ್ಸನ್ನು ಪಡೆದ ವೀರಪಾಂಡ್ಯ ಕಟ್ಟಬೊಮ್ಮನ್ ಚಿತ್ರ ಕೈರೋದಲ್ಲಿ ನಡೆದ 1959ರ ಆಫ್ರೀಷ್ಯಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. ಅಪಾರ ಹಣ ವೆಚ್ಚ ಮಾಡಿ ಎಂ.ಜಿ. ರಾಮಚಂದ್ರನ್ ಅವರು ನಾಯಕಪಾತ್ರವಹಿಸಿದ್ದ ಅಯಿರತ್ತಿಲ್ ಒರುವನ್ ಚಿತ್ರವನ್ನು ಕಾರವಾರದ ಹೊರಾಂಗಣದಲ್ಲಿ ಇವರು ಚಿತ್ರೀಕರಿಸಿದರು. ಒಂದು ಹೆಣ್ಣಿನ ಕಥೆ (1972) ಇವರು ತೆಗೆದ ಕೊನೆಯ ಕನ್ನಡ ಚಿತ್ರ. ತಮಿಳಿನ ಮಧುರೈ ಮೀಟ್ಟಿಯ ಸುಂದರಪಾಂಡಿಯನ್ ಹಾಗೂ ಕನ್ನಡದ ಕಾಲೇಜುರಂಗ ಚಿತ್ರಗಳನ್ನು ನಿರ್ಮಿಸುವ ಸಿದ್ಧತೆಯಲ್ಲಿದಾಗಲೇ ಬೆಂಗಳೂರಿನಲ್ಲಿ ಹೃದಯಾ ಘಾತದಿಂತ (1974) ನಿಧನರಾದರು. ಕನ್ನಡ ಚಿತ್ರೋದ್ಯಮದ ಆರಂಭದಿಂದ ಊರೆಗೋಲಾಗಿದ್ದು ಅದರ ಉತ್ಕರ್ಷಕ್ಕೆ ಶ್ರಮಿಸಿದ ಇವರು ಜಯಲಲಿತ, ಕಲ್ಪನಾ ಮುಂತಾದವರನ್ನು ತೆರೆಗೆ ತಂದು ಕನ್ನಡ ಚಿತ್ರರಂಗದ ಶ್ರೀಮಂತಿಕೆಯನ್ನು ಹೆಚ್ಚಿಸಿದರು. ಖ್ಯಾತ ನಿರ್ದೇಶಕ ಎಸ್.ಆರ್. ಪುಟ್ಟಣ್ಣ ಕಣಗಾಲ್ ಇವರ ನಿರ್ದೇಶನದಲ್ಲೇ ಮುಂದೆ ಬಂದಂಥವರು. 		  (ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ